ಕೆಲಸಗಾರರ ತರಬೇತು

ಒಂದು ಸಂಸ್ಥೆಯ ಕೆಲಸಗಾರರನ್ನು ಎಷ್ಟೇ ಎಚ್ಚರಿಕೆಯಿಂದ ಆಯ್ಕೆ ಮಾಡಿರಲಿ, ಅವರ ವಿದ್ಯಾರ್ಹತೆ ಎಷ್ಟೇ ಉತ್ತಮವಾಗಿರಲಿ, ಅವರಿಗೆ ತಮ್ಮ ಕೆಲಸದಲ್ಲಿ ಎಷ್ಟೇ ಸಾಮಥ್ರ್ಯವಿರಲಿ, ಅವರ ಕಾರ್ಯನಿರ್ವಹಣೆ ಸಮರ್ಪಕವಾಗಿರಬೇಕಾದರೆ ಅವರಿಗೆ ತರಬೇತು ಅಗತ್ಯ. ವಿದ್ಯಾರ್ಥಿಗಳಿಗೆ ತರಗತಿಗಳಲ್ಲೇ ತರಬೇತು ನೀಡುವುದು ಸಾಧ್ಯ. ಆದರೆ ಕಾರ್ಖಾನೆಗಳಲ್ಲಿಯ ಕೆಲಸದ ಪರಿಸ್ಥಿತಿಗಳೇ ಬೇರೆ. ಅಕುಶಲಿಗಳಿಗೆ ಕುಶಲತೆಯನ್ನು ದೊರಕಿಸಿಕೊಡುವುದು ಮತ್ತು ಕಡಿಮೆ ಕುಶಲಿಗಳನ್ನು ಹೆಚ್ಚು ಕುಶಲಿಗಳನ್ನಾಗಿ ಮಾಡುವುದು ತರಬೇತಿನ ಉದ್ದೇಶ. ಒಂದು ಕೆಲಸವನ್ನು ತಪ್ಪಿಲ್ಲದಂತೆ ಮಾಡುವುದನ್ನು ಆರಂಭದಿಂದಲೇ ಹೊಸ ಕೆಲಸಗಾರರಿಗೆ ಕಲಿಸುವುದು ಅವಶ್ಯ. ಹೊಸ ಹೊಸ ಕೆಲಸ ವಿಧಾನಗಳು ರೂಪುಗೊಂಡಂತೆ ಅವನ್ನು ಹಳೆಯ ಕೆಲಸಗಾರರಿಗೆ ಹೇಳಿಕೊಡುವುದಕ್ಕೂ ತರಬೇತು ನೀಡಬೇಕಾಗುತ್ತದೆ. 

ತರಬೇತು ಕಾರ್ಯಕ್ರಮದಿಂದ ಇನ್ನೂ ಅನೇಕ ಪ್ರಯೋಜನಗಳುಂಟು. ತಮ್ಮ ಸಂಸ್ಥೆಯ ನೀತಿನಿಯಮಾವಳಿಗಳನ್ನು ಕೆಲಸಗಾರರಿಗೆ ವಿಶದವಾಗಿ ವಿವರಿಸುವ ಅವಕಾಶ ಅದರ ಕಾರ್ಯನಿರ್ವಾಹಕರಿಗೆ ಲಭ್ಯವಾಗುತ್ತದೆ. ಹಳೆಯ ಕೆಲಸಗಾರರ ನಡುವೆ ಕೆಲಸವನ್ನಾರಂಭಿಸಿದ ಹೊಸಬರೂ ಅವರ ಪೂರ್ವಾಗ್ರಹಗಳನ್ನು ಪಡೆದುಕೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ. ಕಾರ್ಮಿಕ ಆವರ್ತಪ್ರಮಾಣ, ಕೆಲಸಗೇಡು, ಯಂತ್ರ ಸಾಮಗ್ರಿ ನಷ್ಟ-ಮುಂತಾದವನ್ನು ತಗ್ಗಿಸುವುದಕ್ಕೂ ಕೆಲಸಗಾರರ ತರಬೇತು ಅವಶ್ಯಕ. ಕೆಲಸದ ಗುಣಗಾತ್ರಗಳೆರಡನ್ನೂ ಅಧಿಕಗೊಳಿಸಲು ಇದು ಸಾಧಕ. ಕೆಲಗಾರ ಉತ್ತಮಗೊಳ್ಳಬೇಕು-ಎಂಬುದೇ ತರಬೇತು ವ್ಯವಸ್ಥೆಯ ಉದ್ದೇಶವಾದ್ದರಿಂದ ಕೆಲಸಗಾರರ ಮತ್ತು ವ್ಯವಸ್ಥಾಪಕವರ್ಗದ ನಡುವೆ ಒಳ್ಳೆಯ ಸಂಬಂಧ ಬೆಳೆಯುತ್ತದೆ.

ಕೆಲಸಗಾರರ ತರಬೇತು ವಿಧಾನಗಳು ಅನೇಕ. ಉದ್ಯೋಗಿಗೆ ನೇರವಾಗಿ ಅವನ ಕೆಲಸದ ತಾಣದಲ್ಲಿಯೇ ತರಬೇತು ನೀಡುವುದು ಹಳೆಯ ವಿಧಾನ. ಅವಲೋಕನ ಮತ್ತು ಮಾರ್ಗದರ್ಶನದಿಂದ ಉದ್ಯೋಗಿ ಕೆಲಸ ಕಲಿತುಕೊಳ್ಳುತ್ತಾನೆ. ಈ ವಿಧಾನದಲ್ಲಿ ಕೆಲವು ಅನುಕೂಲಗಳು ಉಂಟು. ತರಬೇತಿನ ಅವಧಿ ಮುಗಿದ ಮೇಲೆ ತರಬೇತು ಶಾಲೆಯಿಂದ ಕೆಲಸಮಾಡುವ ತಾಣಕ್ಕೆ ಉದ್ಯೋಗಿಯನ್ನು ವರ್ಗಮಾಡುವ ಅವಶ್ಯಕತೆಯಿಲ್ಲ. ಕೆಲಸದ ಸ್ಥಿತಿಗತಿಗಳಿಗೆ ಉದ್ಯೋಗಿ ನೇರವಾಗಿ ಹೊಂದಿಕೊಳ್ಳುತ್ತಾನಲ್ಲದೆ ಕೆಲಸ ವಿಧಿವಿಧಾನಗಳನ್ನು ಸಹಜವಾಗಿ ಅರಿತುಕೊಳ್ಳುತ್ತಾನೆ. ಉದ್ಯೋಗಿಯ ತರಬೇತಿನ ಕಾಲದಲ್ಲಿ ಅವನ ಯೋಗ್ಯತೆಯನ್ನರಿತುಕೊಳ್ಳುವ ಅವಕಾಶ ವ್ಯವಸ್ಥಾಪಕವರ್ಗಕ್ಕೆ ಲಭ್ಯವಾಗುತ್ತದೆ. ಆದರೆ ಈ ವಿಧಾನದಲ್ಲಿ ನ್ಯೂನತೆಗಳೂ ಉಂಟು. ಹೊಸ ಉದ್ಯೋಗಿಗೆ ಬೋಧಿಸುವ ಸಾಮಥ್ರ್ಯ ಹಳಬನಾದ ನುರಿತ ಕೆಲಸಗಾರನಿಗೆ ಅನೇಕ ವೇಳೆಗಳಲ್ಲಿ ಇರುವುದಿಲ್ಲ. ಅಲ್ಲದೆ ಬೋಧನೆಯ ಕಾಲದಲ್ಲಿ ಅವನ ಕೆಲಸಕ್ಕೆ ಅಡಚಣೆಯಾಗುವ ಸಂಭವವುಂಟು. ನುರಿತ ಕೆಲಸಗಾರರಿಗೆ ಸಹಾಯಕರು ಅವಶ್ಯಕವಾಗಿರುವಂಥ ಕಡೆಗಳಲ್ಲಿ ಈ ವಿಧಾನ ಉಪಯುಕ್ತವಾಗಿದೆ.

ಜೊತೆಗಾರ ಕೆಲಸಗಾರನ ಬದಲು ಕಾರ್ಯಪ್ರಮುಖನೇ ತರಬೇತು ನೀಡುವುದು ಅನಂತರ ಜಾರಿಗೆ ಬಂದ ವಿಧಾನ. ಆದರೆ ಕೆಲಸದ ಮೇಲ್ವಿಚಾರಣೆ ಮತ್ತು ತರಬೇತು ನೀಡಿಕೆ-ಇವೆರಡನ್ನೂ ಏಕಕಾಲದಲ್ಲಿ ನಿರ್ವಹಿಸುವುದು ಅನೇಕ ವೇಳೆ ಕಾರ್ಯಪ್ರಮುಖನಿಗೆ ಸಾಧ್ಯವಾಗದು. ಆದ್ದರಿಂದ ಇದು ಕೂಡ ಅಸಮರ್ಪಕವೇ. ಆದರೆ ಕೆಲಸಗಾರನ ಯೋಗ್ಯತೆಯನ್ನಳೆಯಲು ಈ ವಿಧಾನದಿಂದ ಹೆಚ್ಚು ಅನುಕೂಲ.

ಅನಂತರ ಜಾರಿಗೆ ಬಂದ, ಹಿಂದಿನದಕ್ಕಿಂತ ಉತ್ತಮವಾದ, ವ್ಯವಸ್ಥೆಯೆಂದರೆ ಉದ್ಯಮ ಸಂಸ್ಥೆಯ ಆವರಣದಲ್ಲಿಯೇ, ಆದರೆ ಬೇರೊಂದು ಸ್ಥಳದಲ್ಲಿ, ಒಂದು ವಿಶೇಷ ತರಬೇತು ಶಾಲೆಯ ಸ್ಥಾಪನೆ. ಒಳ್ಳೆಯ ಬೋಧಕರೂ ಪ್ರಯೋಗಾನುಭವಿಗಳೂ ಆದವರನ್ನು ವಿಶೇಷವಾಗಿ ಈ ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ತರಬೇತು ಉನ್ನತಮಟ್ಟದ್ದಾಗಿರುತ್ತದೆ. ಇದರ ಜೊತೆಗೆ, ಕೆಲಸಗಾರರನ್ನು ನಿಯತಕಾಲಗಳಲ್ಲಿ ಕಾರ್ಖಾನೆಗೆ ಕಳುಹಿಸಿಕೊಟ್ಟು ಕೆಲಸದ ತಾಣದಲ್ಲೆ ಅವರಿಗೆ ತರಬೇತು ನೀಡುವ ಕ್ರಮವನ್ನೂ ಇದಕ್ಕೆ ಹೊಂದಿಸಬಹುದು. ತರಬೇತು ಪಡೆಯುವವರಿಗೆ ಇದರಿಂದ ಪ್ರಾಯೋಗಿಕ ಜ್ಞಾನವೂ ಲಭ್ಯವಾದಂತಾಗುತ್ತದೆ.
ವಿಶಿಷ್ಟ ಕ್ಷೇತ್ರಗಳಲ್ಲಿ ಭಾವೀ ಕೆಲಸಗಾರರಿಗೆ ತರಬೇತು ನೀಡುವ ಉದ್ದೇಶದಿಂದ ಸರ್ಕಾರವೂ ಸಾರ್ವಜನಿಕ ಸಂಸ್ಥೆಗಳೂ ತರಬೇತು ಶಾಲೆಗಳನ್ನು ತೆರೆದಿರುವುದುಂಟು.

  
ಕೆಲಸಗಾರರ ತರಬೇತಿನಲ್ಲಿ ಗಮನಾರ್ಹ ಪ್ರಗತಿಯಾದ್ದು ಎರಡನೆಯ ಮಹಾಯುದ್ಧದ ಕಾಲದಲ್ಲಿ. ಅತಿ ಶೀಘ್ರಕಾಲದಲ್ಲಿ ಅಧಿಕಸಂಖ್ಯೆಯಲ್ಲಿ ಕೆಲಸಗಾರರನ್ನು ತರಬೇತು ಮಾಡುವ ಆವಶ್ಯಕತೆ ಆಗ ಉದ್ಭವವಾಯಿತು. ಕೈಗಾರಿಕೆಯೊಳಗೆ ತರಬೇತು ಎಂಬ ಯೋಜನೆ ಆಗ ಜಾರಿಗೆ ಬಂತು. ಇದರ ಮುಖ್ಯ ಲಕ್ಷಣಗಳು ಹೀಗಿವೆ:

ಕೆಲಸಗಾರರಿಗೆ ಮೇಲ್ವಿಚಾರಕನೇ ಕೆಲಸದ ವಿಧಾನವನ್ನು ಕಲಿಸುವುದು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಕೆಲಸ ಬೋಧನೆಯ ಕಾರ್ಯಕ್ರಮವೊಂದನ್ನು ತಯಾರಿಸಲಾಯಿತು. ಕೆಲಸಗಾರ ಸುಲಭವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವಂತೆ ಸರಳಬೋಧನಮಾರ್ಗವನ್ನು ಸೂಚಿಸಲಾಯಿತು. ಕೆಲಸವನ್ನು ವಿವಿಧ ಹಂತಗಳಾಗಿ ಮುರಿದು, ವಿಶೇಷವಾಗಿ ಗಮನಿಸಬೇಕಾದ ಮುಖ್ಯಾಂಶಗಳನ್ನು ಗುರುತಿಸಲಾಯಿತು.

ಕೆಲಸಗಾರರ ನಿರ್ವಹಣೆ, ಅವರ ಕುಂದುಕೊರತೆಗಳ ವಿಚಾರಣೆ-ಈ ವಿಚಾರಗಳಲ್ಲಿ ಮೇಲ್ವಿಚಾರಕ ಕುಶಲನಾಗಿರಬೇಕಾದ್ದು ಅವಶ್ಯವೆನಿಸಿತು. ಇದಕ್ಕಾಗಿ ಕೆಲಸ ಸಂಬಂಧ ಕಾರ್ಯಕ್ರಮವೊಂದು (ಜಾಬ್ ರಿಲೇಷನ್ಸ್ ಪ್ರೋಗ್ರಾಂ) ರೂಪಿತವಾಯಿತು.

	3 ಜಾರಿಯಲ್ಲಿದ್ದ ಉತ್ಪಾದನ ವಿಧಾನಗಳನ್ನು ಸತತವಾಗಿ ಪರಿಶೀಲಿಸಿ ಉತ್ತಮಗೊಳಿಸುವುದು ಅವಶ್ಯವೆನಿಸಿದ್ದರಿಂದ ಇದಕ್ಕಾಗಿ ಕೆಲಸ ವಿಧಾನಗಳ ಕಾರ್ಯಕ್ರಮವೊಂದನ್ನು (ಜಾಬ್ ಮೆಥಡ್ಸ್ ಪ್ರೋಗ್ರಾಂ) ರೂಪಿಸಲಾಯಿತು.

ಕೈಗಾರಿಕೆಯೊಳಗೆ ತರಬೇತು ವ್ಯವಸ್ಥೆಯ ಈ ಮುಖ್ಯ ಸೂತ್ರಗಳನ್ನು ವಿಶ್ವಾದ್ಯಂತ ವ್ಯಾಪಕವಾಗಿ ಜಾರಿಗೆ ತರಲಾಗುತ್ತಿದೆ. ಭಾರತದಲ್ಲಿ ಈ ನಿಟ್ಟಿನಲ್ಲಿ ಆಗಿರುವ ಪ್ರಗತಿ ಅತ್ಯಲ್ಪ. ಅಹಮದಾಬಾದ್ ಜವಳಿ ಕೈಗಾರಿಕೆಯ ಸಂಶೋಧನ ಸಂಘ, ಬೊಂಬಾಯಿ ಜವಳಿ ಸಂಶೋಧನ ಸಂಘ, ದಕ್ಷಿಣ ಭಾರತ ಜವಳಿ ಸಂಶೋಧನ ಸಂಘ ಮುಂತಾದ ಕೆಲವು ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕಾರ್ಯ ಆರಂಭಿಸಿವೆ.  									
	 (ಜೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ